ರಸಲ್, ಜಾನ್
1792-1878. ಪ್ರಸಿದ್ದ ಬ್ರಿಟಿಷ್ ರಾಜಕಾರಣಿ. ಬೆಡ್‍ಫೋರ್ಡ್‍ನ ಆರನೆಯ ಡ್ಯೂಕ್‍ನ ಮೂರನೆಯ ಮಗ. ಈತ ಲಂಡನ್ನಿನಲ್ಲಿ 1792 ಆಗಸ್ಟ್ 18ರಂದು ಜನಿಸಿದ. ವೆಸ್ಟಮಿನಿಸ್ಟರ್ ಮತ್ತು ಎಡಿನ್‍ಬರೋ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ. 1831ರಲ್ಲಿ ತನ್ನ ಸ್ವಂತ ಕ್ಷೇತ್ರವಾದ ಟಾರಿಸ್ಟಾಕ್‍ನಿಂದ ವಿಗ್ ಪಕ್ಷದ ಅಭ್ಯರ್ಥಿಯಾಗಿ ಚುನಾಯಿತನಾಗಿ ಪಾರ್ಲಿಮೆಂಟ್ ಪ್ರವೇಶಿಸಿದ. 1817ರಲ್ಲಿ ಹೇಬಿಯಸ್ ಕಾರ್ಪಸ್ ಆಕ್ಟ್ ರದ್ದಾಗಬೇಕೆಂದು ವಾದಿಸಿದ ಈತ 1819ರಲ್ಲಿ ಪಾರ್ಲಿಮೆಂಟ್ ಸುಧಾರಣೆಯ ಚಳವಳಿಯನ್ನು ಪ್ರಾರಂಭಿಸಿದ. ಅಂದಿನಿಂದ ಪಾರ್ಲಿಮೆಂಟ್ ಸುಧಾರಣೆಯ ವಿಷಯದಲ್ಲಿ ತೀವ್ರ ಆಸಕ್ತಿ ವಹಿಸಿ ಪ್ರತಿವರ್ಷವೂ ಆ ವಿಷಯವನ್ನು ಚರ್ಚೆಗೆ ತರುತ್ತಿದ್ದ. ಈತನಲ್ಲಿ ರಾಜಕೀಯ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮನೋಭಾವವಿದ್ದುದರಿಂದ ಟೆಸ್ಟ್ ಮಸೂದೆ, ಕಾರ್ಪೊರೇಷನ್ ಮಸೂದೆ, ಕ್ಯಾಥೋಲಿಕ್ಕರ ಬಿಡುಗಡೆಗೆ ಸಂಬಂಧಿಸಿದ ಕೆಲವು ಸುಧಾರಣೆಗಳಿಗಾಗಿ ಹೋರಾಡಿದ. ಅನಂತರ ಈತ ಸೈನ್ಯದ ಪೇ ಮಾಸ್ಟರ್ ಜನರಲ್ ಆಗಿ ನೇಮಕ ಹೊಂದಿದ. ಈ ಸಮಯದಲ್ಲಿ ಪಾರ್ಲಿಮೆಂಟಿನ ಸುಧಾರಣಾ ಮಸೂದೆಯೊಂದು ರಚಿತವಾಯಿತು. ಅದನ್ನು ತಯಾರಿಸುವಲ್ಲಿ ಪ್ರಧಾನಪಾತ್ರ ವಹಿಸಿದ್ದ ಈತ ಆ ಮಸೂದೆಯ ಪರ ಪಾರ್ಲಿಮೆಂಟಿನಲ್ಲಿ ಸಮರ್ಥವಾಗಿ ವಾದಿಸಿದ. ಆದರೆ ಆಗ ಇದು ಪಾರ್ಲಿಮೆಂಟಿನಲ್ಲಿ ತಿರಸ್ಕøತವಾಯಿತು; ಅನಂತರ 1832ರಲ್ಲಿ ಅಂಗೀಕರಿಸಲ್ಪಟ್ಟಿತು. ಈ ಸುಧಾರಣೆ ದೇಶದಲ್ಲಿ ಸಂಭವಿಸಬಹುದಾಗಿದ್ದ ಕ್ರಾಂತಿಯನ್ನೂ ಅಂತರ್ಯುದ್ಧವನ್ನೂ ತಪ್ಪಿಸಿತು. ಮುಂದೆ ಮೆಲ್ಬರ್ನ್ ಮಂತ್ರಿಮಂಡಳ ಅಧಿಕಾರಕ್ಕೆ ಬಂದಾಗ ರಸಲ್ ತನ್ನ ಕೆಲಸವನ್ನು ತ್ಯಜಿಸಿದ. 1825ರಲ್ಲಿ ಈತ ಮಂಡಿಸಿದ ಐರಿಷ್ ಚರ್ಚಿನ ಮಸೂದೆ ಸರ್ಕಾರದ ಬೆಂಬಲವನ್ನು ಪಡೆಯದಿದ್ದರೂ ಪಾರ್ಲಿಮೆಂಟಿನಲ್ಲಿ ಅಂಗೀಕೃತವಾಯಿತು ಈ ವೇಳೆಗಾಗಲೇ ಸಮರ್ಥರಾಜಕಾರಣಿ ಎಂದು ಹೆಸರು ಪಡೆದಿದ್ದ. ಮೆಲ್ಬರ್ನ್ ಸರ್ಕಾರದ ಅವಧಿಯಲ್ಲಿ ಹೌಸ್ ಆಫ್ ಕಾಮನ್ಸ್ ಸಭೆಯ ವಿಗ್ ಪಕ್ಷದ ನಾಯಕನಾಗಿ ಚುನಾಯಿತನಾದ ಈತ ಕೆಲಕಾಲ ಗೃಹಶಾಖೆಯ ಕಾರ್ಯದರ್ಶಿಯೂ ಆಗಿದ್ದ (1839-41). 1835ರಲ್ಲಿ ಮುನಿಸಿಪಾರ್ಟಿಗಳ ಸುಧಾರಣೆಯ ಮಸೂದೆಯೊಂದನ್ನು ಮಂಡಿಸಿದ. ಇದು ಅಂಗೀಕೃತವಾಗಿ ಸ್ಥಳೀಯ ಸಂಸ್ಥೆಗಳ ಬೆಳೆವಣಿಗೆಗೆ ಸಹಾಯಕವಾಯಿತು. ವಿವಾಹ, ಜನನ-ಮರಣಗಳ ದಾಖಲೆ ಇಡಬೇಕೆಂಬ ಮಸೂದೆ, ಮದುವೆಗಳ ನಿಯಮಕ್ಕೆ ಸಂಬಂಧಿಸಿದ ಮಸೂದೆ, ಇಂಗ್ಲೆಂಡಿನ ಚರ್ಚಿನ ಸುಧಾರಣೆಗೆ ಸಂಬಂಧಿಸಿದ ಮಸೂದೆ-ಮೊದಲಾದವು ಈತ ಮಂಡಿಸಿದ ಕೆಲವು ಮುಖ್ಯ ಮಸೂದೆಗಳು.

  	ಮೆಲ್ಬರ್ನ್ ಸರ್ಕಾರ ಸೋತು ಪೀಲ್ ಪ್ರಧಾನಮಂತ್ರಿಯಾದಾಗ ರಸಲ್ ತನ್ನ ಸಂಗಡಿಗರೊಡನೆ ಬಲವಾದ ವಿರೋಧಪಕ್ಷವನ್ನು ರಚಿಸಿದ. 1841-45ರ ಅವಧಿಯಲ್ಲಿ ಈತ ವಿರೋಧಪಕ್ಷದ ನಾಯಕವಾಗಿದ್ದ. ಈ ಸಂದರ್ಭದಲ್ಲಿ ಆಗ ಜಾರಿಯಲ್ಲಿದ್ದ ಕಾರ್ನ್ ಲಾ ಪದ್ಧತಿಯನ್ನು ರದ್ದುಪಡಿಸಲು ಹೋರಾಡಿದ. 1840ರಲ್ಲಿ ಪೀಲ್ ಮಂತ್ರಿಮಂಡಲ ಪತನಹೊಂದಿದಾಗ ಈತ ಪ್ರಧಾನಮಂತ್ರಿಯಾಗುವ ಅವಕಾಶ ಲಭಿಸಿತು. ಆದರೆ ಈತನ ಅಧಿಕಾರ ಬಹುಕಾಲ ಉಳಿಯಲಿಲ್ಲ. ಮುಂದೆ ಬಂದ ಅಬರ್ಡೀನ್ ಸರ್ಕಾರದಲ್ಲಿ ಈತ ವಿದೇಶಾಂಗ ಕಾರ್ಯದರ್ಶಿಯಾದ. 1855ರಲ್ಲಿ ವಿಯನ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಇಂಗ್ಲೆಂಡನ್ನು ಪ್ರತಿನಿದಿಸಿದ. ಅನಂತರ ಪಾಮಸ್ರ್ಟನ್‍ನ ಅಧಿಕಾರವಧಿಯಲ್ಲಿ 1860ರಲ್ಲಿ ಮತ್ತೆ ವಿದೇಶಾಂಗ ಕಾರ್ಯದರ್ಶಿಯಾಗಿ 1865ರ ತನಕ ಆ ಹುದ್ದೆಯಲ್ಲಿದ್ದ ಈ ಸಂದರ್ಭದಲ್ಲಿ ಅನೇಕ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಹು ಚಾಣಾಕ್ಷತನದಿಂದ ಎದುರಿಸಿದ. ಇಟಲಿಯಲ್ಲಿ ನಡೆಯುತ್ತಿದ್ದ ಏಕತಾ ಚಳವಳಿಗೆ ಇಂಗ್ಲೆಂಡಿನ ನೈತಿಕ ಬೆಂಬಲ ದೊರಕಿಸಲು ಅಪಾರವಾಗಿ ಶ್ರಮಿಸಿದ ಅಮೆರಿಕದ ಅಂತರ್ಯುದ್ದದ ಸಮಯದಲ್ಲಿ ಇಂಗ್ಲೆಂಡ್ ಬಲು ಎಚ್ಚರಿಕೆಯಿಂದ ತಾಟಸ್ಥ್ಯ ನೀತಿಯನ್ನು ಅನುಸರಿಸುವಂತೆ ನೋಡಿಕೊಂಡ: ಪೋಲೆಂಡಿನಲ್ಲಿ ರಷ್ಯ ಅನುಸರಿಸಿದ ದಬ್ಬಾಳಿಕೆಯನ್ನು ಉಗ್ರವಾಗಿ ಖಂಡಿಸಿದ.

 	ವಿದ್ಯಾಭ್ಯಾಸದ ಬೆಳೆವಣಿಗೆಯ ಬಗ್ಗೆ ರಸಲ್‍ಗೆ ವಿಶೇಷ ಆಸಕ್ತಿಯಿತ್ತು. ಇಂಗ್ಲೆಂಡಿನ ವಿದ್ಯಾಭ್ಯಾಸ ಪದ್ದತಿ ಉತ್ತಮಗೊಳ್ಳಲು ಬಹಳವಾಗಿ ಶ್ರಮಿಸಿದ. ಯೆಹೊದ್ಯರು ಪಾರ್ಲಿಮೆಂಟಿನಲ್ಲಿ ಸ್ಥಾನವನ್ನು, ಪಡೆಯಬೇಕೆಂದು ವಾದಿಸಿದ. ಪಾಮಸ್ರ್ಟನ್‍ನ ಮರಣಾನಂತರ (1865) ಈತ ಮತ್ತೊಮ್ಮೆ ಪ್ರಧಾನಮಂತ್ರಿಯಾದ. ಆದರೆ ಇವನ ಅಧಿಕಾರಾವಧಿಯಲ್ಲಿ ಪಾರ್ಲಿಮೆಂಟಿನಲ್ಲಿ ಇವನಿಗೆ ಸ್ಪಷ್ಟ ಬಹುಮತವಿರಲಿಲ್ಲ. ಗ್ಲಾಡಸ್ಟನ್ ಜತೆಯಲ್ಲಿ ಮಂಡಿಸಿದ ಸುಧಾರಣಾ ಮಸೂದೆಯೊಂದರ ಪರಿಣಾಮವಾಗಿ ಈತನ ಸರ್ಕಾರ ಕೆಳಗಿಳಿಯಬೇಕಾಯಿತು. (1866).

   	ರಸಲ್ ಒಳ್ಳೆಯ ಭಾಷಣಕಾರನೂ ದಕ್ಷ ಅಧಿಕಾರಿಯೂ ಆಗಿದ್ದ. ಈತನಿಗೆ ವಿಗ್ ಪಕ್ಷದ ತತ್ತ್ವಗಳಲ್ಲಿ ಅಚಲಶ್ರದ್ಧೆಯಿತ್ತು. ಇವನ ಆತ್ಮವಿಶ್ವಾಸ, ನಿಸ್ವಾರ್ಥ ಸೇವೆ, ತನ್ನ ಗುರಿಯಲ್ಲಿ ಅಚಲನಂಬುಗೆ ಇವನನ್ನು ಜನಪ್ರಿಯನನ್ನಾಗಿ ಮಾಡಿದ್ದುವು. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡಿದ್ದ ಈತ ತನ್ನ ಕೊನೆಯ ದಿನಗಳನ್ನು ಬರೆವಣಿಗೆಗೆ ಮೀಸಲಾಗಿಟ್ಟ. ಮೆಮೊರಿಸ್ ಆಫ್ ದಿ ಅಫೇರ್ಸ್ ಆಫ್ ಯುರೋಪ್ ಕರೆಸ್ಟಾಂಡೆನ್ಸ್ ಆಫ್ ಜಾನ್ ಫೋರ್ತ್ ಡ್ಯೂಕ್ ಆಫ್ ಬೆಡ್ ಪೋರ್ಡ್ ಲೈಫ್ ಅಂಡ್ ಲೆಟರ್ಸ್ ಆಫ್ ತಾಮಸ್ ಮೂರ್; ಕರೆಸ್ಪಾಂಡೆನ್ಸ್ ಆಫ್ ತಾಮಸ್ ಜೇಮ್ಸ್ ಕುಕ್-ಇವು ಈತನ ಕೆಲವು ಮುಖ್ಯ ಗ್ರಂಥಗಳು.
(ಎಂ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ